ಪುಲುಮಾವಿ -
	ಆಂಧ್ರದಲ್ಲಿ ಆಳಿದ ಸಾತವಾಹನ ಅರಸರಲ್ಲಿ ಈ ಹೆಸರಿನ ಮೂವರು ಅರಸರನ್ನು ಗುರುತಿಸಲಾಗಿದೆ. ಮತ್ಸ್ಯ, ವಾಯು, ಬ್ರಹ್ಮಾಂಡ, ವಿಷ್ಣು ಮತ್ತು ಭಾಗವತ ಪುರಾಣಗಳಲ್ಲಿ ಈ ಹೆಸರಿನಲ್ಲೂ ಇವರ ಆಳ್ವಿಕೆಯ ಕಾಲಗಳಲ್ಲೂ ವ್ಯತ್ಯಾಸಗಳು ಕಂಡುಬಂದಿದೆ. ಇವರ ಲಭ್ಯ ಶಾಸನಾಧಾರಗಳನ್ನವಲಂಬಿಸಿ ಇತ್ತೀಚಿಗೆ ಈ ಬಗ್ಗೆ ಸಮನ್ವಯವನ್ನು ಸಾಧಿಸಲು ಯತ್ನಿಸಲಾಗಿದೆ. ಮೊದಲನೆಯ ಪುಲುಮಾವಿಯನ್ನು ವಾಯು, ಬ್ರಹ್ಮಾಂಡ ಹಾಗೂ ವಿಷ್ಣುಪುರಾಣಗಳಲ್ಲಿ ಪಟುಮಾನ್ ಎಂದೂ ಭಾಗವತ ಪುರಾಣದಲ್ಲಿ ಅಟಮಾನ್ ಎಂದೂ ಕರೆಯಲಾಗಿದೆ. ಒಂದನೆಯ ಪುಲುಮಾವಿಯ ಆಳ್ವಿಕೆಯ ಕಾಲ ಕ್ರಿ. ಪೂ. 43-19 ಎಂದು (ಇತ್ತೀಚೆಗೆ 55-31 ಎಂದು) ಭಾವಿಸಲಾಗಿದೆ. ಇಮ್ಮಡಿ ಪುಲುಮಾವಿಯನ್ನು ಪುಲೋಮ ಎಂದು ಕೆಲವು ಹಸ್ತಪ್ರತಿಗಳಲ್ಲಿ ಬರೆದಿರುವುದನ್ನು ಗಮನಿಸಲಾಗಿದೆ. ಮತ್ಸ್ಯಪುರಾಣದ ಪ್ರತಿಯೊಂದರಲ್ಲಿ ಆಂಧ್ರರು ಪುಲೋಮ ವಂಶಸ್ಥರು ಎಂದು ಹೇಳಿರುವುದು ಈ ಪುಲುಮಾವಿಯ ಔನ್ನತ್ಯವನ್ನು ತೋರಿಸುತ್ತದೆ. ಈತನ ಕಾಲದಲ್ಲಿ ಭಾರತದ ಉತ್ತರ, ವಾಯುವ್ಯ ಭಾಗಗಳು ಶಕ-ಪಹ್ಲವರ ಅಧೀನದಲ್ಲಿದ್ದುವು. ಅವರ ದಕ್ಷಿಣ ದಂಡಯಾತ್ರೆಯನ್ನು ನಿರೋಧಿಸುವುದು ಮಗಧ ಸಾಮ್ರಾಜ್ಯದ ಕಾಣ್ವವಂಶ ರಾಜರುಗಳಿಗೆ ದುಸ್ಸಾಧ್ಯವಾಗಿತ್ತು. ವಿದೇಶೀಯರ ಆಕ್ರಮಣವನ್ನು ತಪ್ಪಿಸಲೆಂದೋ ಏನೋ ಪುಲುಮಾವಿ ಕಾಣ್ವ ಸುಶರ್ಮನನ್ನು ವಧಿಸಿ ಮಗಧ ರಾಜ್ಯವನ್ನು ವಶಪಡಿಸಿಕೊಂಡನಾದರೂ ಅಲ್ಲಿಯ ಆಡಳಿತವನ್ನು ಸುಬದ್ಧಗೊಳಿಸುವ ಮೊದಲೇ ಆತ ನಿಧನ ಹೊಂದಿದ. ಅನಂತರ 5-6 ವರ್ಷಗಳಲ್ಲೇ ರಾಜಸ್ಥಾನ, ಮಾಳವ, ಗುಜರಾತ್, ಕೊಂಕಣ, ನಾಸಿಕ್ ಮುಂತಾದ ಪ್ರಾಂತಗಳನ್ನೆಲ್ಲ ಶಕ-ಪಹ್ಲವರ ನಹಪಾಣ ಆಕ್ರಮಿಸಿದ.

	ಎರಡನೆಯ ಪುಲುಮಾವಿ ಗೌತಮೀ ಪುತ್ರ ಶಾತಕರ್ಣಿಯ ಮಗ. ಈತನನ್ನು ವಾಸವಿ ಪುತ್ರ (ವಾಶಿಷ್ಠೀ ಪುತ್ರ) ಎಂದು ಕರೆಯಲಾಗಿದೆ. ಪುಲೋಮ (ಮತ್ಸ್ಯ), ಅಟಮಾನ್ (ವಿಷ್ಣು). ಪುರಿಮಾನ (ಭಾಗವತ) ಎಂಬ ಹೆಸರಿನ ಇತರ ರೂಪಗಳಿಂದ ಕರೆಯಲ್ಪಟ್ಟ ಈತನ ಆಳ್ವಿಕೆಯ ಕಾಲ 86 ರಿಂದ 114 (116 ರಿಂದ 144) ಸುಮಾರು 28 ವರ್ಷಗಳ ಕಾಲ ರಾಜ್ಯಭಾರ ಮಾಡಿದ ಈತ ದಕ್ಷಿಣಾಪಥೇಶ್ವರ ಎಂಬ ಬಿರುದು ಪಡೆದ. ಆದರೆ, ಈತನ ರಾಜ್ಯಭಾರ ಕಾಲದ ಅಂತಿಮ ವರ್ಷಗಳಲ್ಲಿ ಉತ್ತರದಲ್ಲಿ ಕುಷಾನರ ಕನಿಷ್ಕ ಸಿಂಧೂ ನದಿಯ ದಕ್ಷಿಣ ಭಾಗಗಳನ್ನು ಆಕ್ರಮಿಸಿಕೊಂಡ ಅಂಶ ಶಾಸನಗಳಿಂದ ವಿಧಿತವಾಗಿದೆ. ಉಜ್ಜಯಿನಿಯಲ್ಲಿ ಚಷ್ಟನ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ಪೈಠಾನದಲ್ಲಿ ಪುಲುಮಾವಿ ಪ್ರಭುವಾಗಿದ್ದನೆಂಬ ಟಾಲೆಮಿಯ ಹೇಳಿಕೆಯಿಂದ ಆ ವೇಳೆಗೆ ಮಾಳವ ದೇಶ ಆಂಧ್ರದ ಕೈಬಿಟ್ಟಿತೆಂದು ತಿಳಿದುಬರುತ್ತದೆ.

	ಮೂರನೆಯ ಪುಲುಮಾವಿ ಸುಮಾರು 7 ವರ್ಷಗಳ ಕಾಲ 166 ರಿಂದ 174ರವರೆಗೆ (217-224) ಆಳಿದ. ಈತನದ್ದೆನ್ನಲಾದ ಶಾಸನವೊಂದು ಬಳ್ಳಾರಿಯ ಸಮೀಪದ ಮ್ಯಾಕಡೋನಿಯಲ್ಲಿ ದೊರೆತಿದೆ. ಈತ ಬಳ್ಳಾರಿ ಜಿಲ್ಲೆಯ ಸುತ್ತಲಿನ ಸಾತವಾಹ ವಿಹಾರ ಎಂಬ ಪ್ರದೇಶವನ್ನು ಮಹಾಸೇನಾಪತಿ ಖಂಡನಾಗನ ಅಧಿಕಾರಕ್ಕೊಳಪಡಿಸಿದನೆಂದು ತೋರುತ್ತದೆ. ಪಶ್ಚಿಮ ಹಾಗೂ ದಕ್ಷಿಣ ಭಾಗಗಳಲ್ಲಿ ಚುಟುಗಳು, ನಾಸಿಕ ಪ್ರಾಂತ್ಯದಲ್ಲಿ ಅಭೀರರು, ಪೂರ್ವದಲ್ಲಿ ಇಕ್ಷ್ವಾಕುಗಳು ಇಂಥವರು ಆಗ ಬಲಿಷ್ಠರಾಗಿ ಸ್ವತಂತ್ರವಾಗಿ ಆಳತೊಡಗಿದ್ದುದರಿಂದ ಸಾತವಾಹನರ ಬಲ ಕುಗ್ಗಿತು. ವಾಸ್ತವಿಕವಾಗಿ 3 ನೆಯ ಪುಲುಮಾವಿಯೇ ಈ ಮನೆತನದ ಕೊನೆಯ ಅರಸ.									(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ